ಫೋಸ್ಕೋಲೋ, ಊಗೊ
	1778-1827. ಇಟಲಿಯ ಪ್ರತಿಭಾವಂತ ಕವಿ. 1797ರಲ್ಲಿ ಫ್ರಾನ್ಸಿನ ಮಹಾಕ್ರಾಂತಿಯ ಆದರ್ಶಗಳನ್ನು ಸ್ವಾಗತಿಸಿ ನೆಪೋಲಿಯನ್ನನನ್ನು ಪ್ರಶಂಸಿಸಿ ಪ್ರಗಾಥವೊಂದನ್ನು ರಚಿಸಿದ. ಆಮೇಲೆ ನೆಪೋಲಿಯನ್ನನನ್ನು ರಾಜಕೀಯ ಧೋರಣೆಯನ್ನು ಒಪ್ಪಲಾರದೆ ಪಾಡುವ ನಗರವನ್ನು ಬಿಟ್ಟು, ಫ್ಲಾರೆನ್ಸ್, ಮಿಲಾನ್, ಬೊಲೋನಾಗಳಲ್ಲಿ ಪ್ರವಾಸಮಾಡುತ್ತ ಇಟಲಿಯ ರಾಜಕೀಯ ಹಾಗೂ ಸಾಮಾಜಿಕ ಪರಿಸ್ಥಿತಿಯನ್ನು ಕಟುವಾಗಿ ಟೀಕಿಸಿ ಜಕೊಪೊ ಆರ್ಟಿಸ್ ಎಂಬ ಪತ್ರರೂಪದ ಕಾದಂಬರಿಯನ್ನು ಬರೆದ. ಇದು ಜರ್ಮನಿಯ ಗಯಟೆ ಕವಿಯ ವರ್ದರ್ ಕಾವ್ಯವನ್ನುನುಸರಿಸಿ ಬರೆದ ಕೃತಿ. ಇವನು ಜಿನೋವಾದ ರಕ್ಷಣೆಗಾಗಿ ರಷ್ಯ, ಆಸ್ಟ್ರಿಯಗಳ ವಿರುದ್ಧ ನಡೆದ ಯುದ್ಧದಲ್ಲಿ ಭಾಗವಹಿಸಿದ್ದ. 1806ರಲ್ಲಿ ಇವನು ಬರೆದ ಸಪೋಲ್ಚ್ರಿ (ಗೋರಿಗಳು) ಎಂಬ ಪದ್ಯ ಸುಪ್ರಸಿದ್ಧವಾಯಿತು. ಹೆಣಗಳನ್ನು ಹೂಳುಗಾಡಿನಲ್ಲೇ ಸಮಾಧಿಮಾಡಬೇಕೆಂದು ನೆಪೋಲಿಯನ್ ಹೊರಡಿಸಿದ ಆಜ್ಞೆಗೆ ಪ್ರತಿಕ್ರಿಯೆ ಈ ಕಾವ್ಯದಲ್ಲಿದೆ. ಆರ್ಟಿಸ್ ಕಾದಂಬರಿ ನಿರಾಸೆಯ ಮನೋಭಾವವನ್ನು ವ್ಯಕ್ತಪಡಿಸುತ್ತದೆ. ಆದರೆ ಗೋರಿಗಳು ಎಂಬ ಕಾವ್ಯ ಭರವಸೆ ಮತ್ತು ಸಹಿಷ್ಣುತೆಗಳ ಸಂದೇಶವನ್ನು ನಿರೂಪಿಸುತ್ತದೆ. ಈ ಕಾವ್ಯದ ಪ್ರಭಾವವನ್ನು ಅಂದಿನ ಇಂಗ್ಲಿಷ್ ಕವಿಗಳಾದ ತಾಮಸ್ ಗ್ರೇ, ಯಂಗ್ ಮುಂತಾದವರ ಕೃತಿಗಳಲ್ಲಿ ಕಾಣಬಹುದು. 1814ರಲ್ಲಿ ಆಸ್ಟ್ರಿಯನ್ನರು ಪುನಃ ಅಧಿಕಾರಕ್ಕೆ ಬಂದಾಗ ಈತ ದೇಶಸೇವೆಯ ಪ್ರಮಾಣವಚನವನ್ನು ಸ್ವೀಕರಿಸಲು ನಿರಾಕರಿಸಿ ಸ್ವದೇಶವನ್ನು ತ್ಯಜಿಸಿ ಸ್ವಿಟ್ಜರ್ಲೆಂಡ್, ಇಂಗ್ಲೆಂಡ್ ಮುಂತಾದ ಕಡೆಗಳಲ್ಲಿ ಪ್ರವಾಸ ಮಾಡಿದ. ತನ್ನ ವಿಮರ್ಶಾ ಲೇಖನಗಳಿಂದ, ಉಪನ್ಯಾಸಗಳಿಂದ ಹೇರಳವಾಗಿ ಹಣವನ್ನು ಗಳಿಸಿದರೂ ಸಾಯುವಾಗ ನಿರ್ಗತಿಕನಾಗಿದ್ದ.

	ಆಳವಾದ ವಿದ್ವತ್ತು, ಸ್ವಂತ ಆಲೋಚನೆ, ಕಲಾನಷ್ಠೆ, ಶೈಲಿಯ ವೈಭವ-ಈ ಗುಣಗಳಿಂದಾಗಿ ಇವನು ಇಟಾಲಿಯನ್ ಸಾಹಿತ್ಯದಲ್ಲಿ ಚಿರಸ್ಥಾಯಿಯಾಗಿದ್ದಾನೆ.
(ಎಚ್.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ